Ayodhya Ram Mandir : ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ. ದೇಶದಾದ್ಯಂತ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಹಲವು ರಾಜ್ಯಗಳ ಸರ್ಕಾರ ಜನವರಿ 22 ರಂದು ಸಾರ್ವಜನಿಕ ರಜೆ ಘೋಷಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದ್ದು, ಜನವರಿ 22 ರಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಅರ್ಧ ದಿನ ರಜೆ ನೀಡಿದೆ.
ಹೌದು.. ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಕೇಂದ್ರದ ಮೋದಿ ಸರ್ಕಾರ ಗುರುವಾರ (ಜನವರಿ 18) ದೊಡ್ಡ ಘೋಷಣೆ ಮಾಡಿದೆ. ಜನವರಿ 22 ರಂದು ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
22 ರಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸುತ್ತೋಲೆ ಪ್ರಕಾರ, ಜನವರಿ 22 ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ನೀಡಲಾಗಿದೆ. ಜನವರಿ 22, ಸೋಮವಾರ, ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಮಧ್ಯಾಹ್ನ 2.30 ರವರೆಗೆ ರಜೆ ಇರುತ್ತದೆ. ಅದರ ನಂತರ ಎಲ್ಲಾ ಸರ್ಕಾರಿ ಕಚೇರಿಗಳು ತಮ್ಮ ಕೆಲಸವನ್ನು ಮಾಡುತ್ತವೆ.